ಮೂರ್ತಿರಾವ್, ಎ ಎನ್
1900.-2004 ಕನ್ನಡದ ಹೆಸರಾಂತ ಹಿರಿಯ ವಿದ್ವಾಂಸರಲ್ಲಿ ಒಬ್ಬರು, ಪ್ರಸಿದ್ಧ ವಿಮರ್ಶಕರು. ಪ್ರಬಂಧಕಾರರು. ಅಕ್ಕಿ ಹೆಬ್ಬಾಳು ನರಸಿಂಹ ಮೂರ್ತಿರಾವ್ ಇವರ ಪೂರ್ಣ ಹೆಸರು. ಹುಟ್ಟಿದ್ದು 16-6-1900ರಂದು. ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳಿನಲ್ಲಿ. ತಂದೆ ಸುಬ್ಬರಾಯರು, ತಾಯಿ ಪುಟ್ಟಮ್ಮನವರು ಬಾಲ್ಯದ ದಿನಗಳನ್ನು ಮೇಲುಕೋಟೆ. ನಾಗಮಂಗಲಗಳಲ್ಲಿ ಕಳೆದರು. ಬಾಲ್ಯದಲ್ಲಿ ಹಳ್ಳಿಯ ವಾತಾವರಣದಲ್ಲೂ ಸಂಗೀತ, ಸಾಹಿತ್ಯ ಎರಡರಲ್ಲೂ ಇವರಿಗೆ ತೀವ್ರವಾದ ಆಸಕ್ತಿ ಮೂಡಿತು. ಮೈಸೂರಿನಲ್ಲಿದ್ದ ಬಂಧುಗಳೊಬ್ಬರು ಇವರನ್ನು ಒತ್ತಾಯಮಾಡಿ 1913ರಲ್ಲಿ ಹಳ್ಳಿಯಿಂದ ತಮ್ಮ ಮನೆಗೆ ಕರೆದು ತಂದು ಶಾಲೆಗೆ ಸೇರಿಸಿದರು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೆ ಇವರಿಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಅಭಿರುಚಿ ಹುಟ್ಟಿತು. ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಗ್ರಂಥಗಳ ಓದಿನ ಜೊತೆಗೆ ಸೊಗಸಾದ ಇಂಗ್ಲಿಷ್ ಬರೆವಣಿಗೆಯನ್ನೂ ರೂಢಿಸಿಕೊಂಡರು. ವೆಸ್ಲಿಯನ್ ಮಿಷನ್‍ಸ್ಕೂಲಿನ ಪ್ರಿನ್ಸಿಪಾಲರಾಗಿದ್ದ ರೆವರೆಂಡ್ ಆರ್.ಡಬ್ಲ್ಯು.ಬೂಟ್ ಮತ್ತು ಅಧ್ಯಾಪಕ ಡಿ.ಎನ್.ಮೂರ್ತಿ ಅವರು ಇವರಲ್ಲಿ ಮೂಡಿದ್ದ ಇಂಗ್ಲಿಷ್ ಭಾಷೆ ಸಾಹಿತ್ಯಗಳ ಬೆಳವಣಿಗೆಗೆ ನೀರೆರೆದರು.

	ರಾಯರು ವೆಸ್ಲಿಯನ್ ಹೈಸ್ಕೂಲಿನಲ್ಲಿ ಎಂಟ್ರೆನ್ಸ್ (ಪ್ರಿ-ಯೂನಿವರ್ಸಿಟಿ) ಮುಗಿಸಿ ಮಹಾರಾಜ ಕಾಲೇಜು ಸೇರಿದರು. ಜ್ಞಾನ ಪ್ರಪಂಚದ ಅನೇಕ ದಿಗ್ಗಜಗಳು ಅಂದಿಗೆ ಆ ಕಾಲೇಜಿನಲ್ಲಿ ಪ್ರಾಧ್ಯಾಪಕ ವರ್ಗದಲ್ಲಿದ್ದರು. ಕಾಲೇಜಿನ ಪ್ರೊಫೆಸರ್ ಜೆ. ಸಿ. ರಾಲೋ ಅವರು ಈ ತರುಣನ ಇಂಗ್ಲಿಷ್ ಭಾಷಾ ಪ್ರೇಮವನ್ನು ಉಜ್ವಲಗೊಳಿಸಿದರು. ಎಸ್. ರಾಧಾಕೃಷ್ಣನ್‍ರವರು ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಅವರ ಆಕರ್ಷಣೆಯಿಂದಾಗಿ ಮೂರ್ತಿರಾಯರು ಇಂಗ್ಲಿಷ್ ಸಾಹಿತ್ಯದ ಜೊತೆಗೆ ತತ್ವಶಾಸ್ತ್ರವನ್ನೂ ಅಧ್ಯಯನ ವಿಷಯವಾಗಿ ಆಯ್ದುಕೊಂಡರು. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು ಹೊಸಗನ್ನಡ ನವೋದಯ ಸಾಹಿತ್ಯದ ಆಚಾರ್ಯ ಪುರುಷರೆಂದು ಪ್ರಸಿದ್ಧಿ ಪಡೆದ ಬಿ.ಎಂ. ಶ್ರೀಕಂಠಯ್ಯನವರು ಮೂರ್ತಿರಾಯರ ಇನ್ನೊಬ್ಬ ಗುರುಗಳು. ಈ ಪರಿಸರದಲ್ಲಿ ಅಧ್ಯಯನ ಮಾಡಿ ಇವರು 1922ರಲ್ಲಿ ಬಿ.ಎ. ಪದವಿ ಪಡೆದರು. ಇಂಗ್ಲಿಷ್ ಭಾಷೆ, ಸಾಹಿತ್ಯಗಳನ್ನು ಪ್ರಧಾನ ವಿಷಯಗಳನ್ನಾಗಿ ಅಧ್ಯಯನ ಮಾಡಿ 1924ರಲ್ಲಿ ಎಂ. ಎ. ಪದವಿ ಪಡೆದರು.

	ರಾಯರು ಚಿಕ್ಕವಯಸ್ಸಿನಿಂದಲೂ ಪ್ರತಿಯೊಂದು ಘಟನೆಯನ್ನು ವಸ್ತುನಿಷ್ಟವಾಗಿ, ಭಾವೋದ್ವೇಗಕ್ಕೆ ಒಳಗಾಗದೆ, ಚಿಕಿತ್ಸಕ ದೃಷ್ಟಿಯಿಂದ ನೋಡುವುದನ್ನು ಬೆಳಸಿಕೊಂಡಿದ್ದರು. ಈ ಕಾರಣದಿಂದಲೇ ಅಂದಿನ ವಿದ್ವತ್ ಪ್ರಪಂಚದ ಯಾವ ವ್ಯಕ್ತಿಯ ಪ್ರಭೆಯೂ ರಾಯರನ್ನು ಮರುಳುಗೊಳಿಸಲಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಗುಣದೋಷಗಳನ್ನು ಪರಿಶೀಲಿಸಿ, ಗುಣಗಳನ್ನು ಸ್ವೀಕರಿಸಿ, ದೋಷಗಳಿಂದ ಪಾರಾಗಲು ನೆರವಾದದ್ದು ಇವರ ವಸ್ತು ನಿಷ್ಠದೃಷ್ಟಿ. ಮಹಾರಾಜ ಕಾಲೇಜಿನ ವಿದ್ವಾಂಸರು ವಿದ್ವತ್ತು. ವ್ಯಕ್ತಿತ್ವಗಳಲ್ಲಿ ಇತರರು ತಮ್ಮ ಎತ್ತರಕ್ಕೆ ಏರುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು. ಕೈನೀಡಿ ಇವರನ್ನು ತಮ್ಮ ಹತ್ತಿರಕ್ಕೆ ಎಳೆದುಕೊಂಡರು. ಭುಜಕೊಟ್ಟು ಇನ್ನೂ ಮೇಲಕ್ಕೆ ಏರಲು ನೆರವಾದರು. ಪುಣ್ಯವಶಾತ್ ಉತ್ತಮ ಮಿತ್ರ ಮಂಡಳಿಯೂ ರಾಯರಿಗೆ ದೊರೆತಿತ್ತು. ತೀ. ನಂ. ಶ್ರೀಕಂಠಯ್ಯ. ಡಿ.ಎಲ್. ನರಸಿಂಹಾಚಾರ್, ಕುವೆಂಪು, ಜಿ. ಹನುಮಂತರಾವ್ ಇವರುಗಳೇ ಆ ಮಿತ್ರಮಂಡಳಿ. ಮುಂದೆ ಪು. ತಿ. ನರಸಿಂಹಾಚಾರ್ಯರೂ ಆ ಗುಂಪಿಗೆ ಸೇರಿದರು. ಹೀಗೆ ಇವರು ಅನಾಯಾಸವಾಗಿ ವಿದ್ವತ್ತಿನ ದಿಗ್ಗಜಗಳನ್ನೂ ಸಾಹಿತ್ಯಲೋಕದ ಹಿಮಾಲಯದ ಶಿಖರಗಳನ್ನೂ ಬಾಲ ಕಡಲಿನ ಬೆಳಕಿನ ಕಂಬಗಳನ್ನೂ ಕಂಡು ಒಡನಾಡಿ ಹರ್ಷಿಸಿದರು.

	1924ರಲ್ಲಿ ಮೂರ್ತಿರಾಯರು ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಟ್ಯೂಟರ್ ಆಗಿ ಕೆಲಸಕ್ಕೆ ಸೇರಿ ಸ್ವಲ್ಪ ಕಾಲ ಆ ಹುದ್ದೆಯಲ್ಲಿದ್ದರು. 1925-27ರ ತನಕ ಮೈಸೂರು ಮಹಾರಾಜ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. 1927ರಲ್ಲಿ ಮತ್ತೆ ಕಾಲೇಜು ಅಧ್ಯಾಪಕರಾದರು. 1940ರಲ್ಲಿ ಉಪಪ್ರಾಧ್ಯಾಪಕರಾದರು. 1940-43ರ ತನಕ ಶಿವಮೊಗ್ಗೆಯ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿದ್ದರು. 1943ರಲ್ಲಿ ಮೈಸೂರು ಆಕಾಶವಾಣಿಯು ಸಹಾಯಕ ನಿರ್ದೇಶಕರಾಗಿ ನೇಮಕಗೊಂಡರು. ಸುಮಾರು ನಾಲ್ಕು ವರ್ಷಗಳ ಕಾಲ ಅಲ್ಲಿ ಅವರು ಸಲ್ಲಿಸಿದ ಸೇವೆ ಚಿರಸ್ಮರಣೀಯವಾದದ್ದು. ಅನೇಕ ಹೊಸ ಕಲಾವಿದರನ್ನು ಬೆಳಕಿಗೆ ತಂದದ್ದು. ಈಗಾಗಲೇ ಕಲಾ ಪ್ರಪಂಚದಲ್ಲಿ ಹೆಸರು ಪಡೆದಿದ್ದವರಿಗೆ ಹೆಚ್ಚಿನ ಗೌರವ ದೊರಕುವಂತೆ ಮಾಡಿದ್ದು, ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಇವು ಮೂರ್ತಿರಾಯರ ಸಾಧನೆಗಳಲ್ಲಿ ಕೆಲವು. ಆಕಾಶವಾಣಿ ಅಂದು ಹೆಚ್ಚು ಕಡಿಮೆ ಶೈಶವಾವಸ್ಥೆಯಲ್ಲಿತ್ತು ಎಂಬುದನ್ನು ನೆನೆದರೆ ರಾಯರ ಸೇವೆ ಅದಕ್ಕೆ ಎಷ್ಟೊಂದು ಬಗೆಯಲ್ಲಿ ಆಯಿತು ಎಂಬುದನ್ನು ಊಹಿಸಬಹುದು.

	1948ರಲ್ಲಿ ಮೂರ್ತಿರಾಯರು ಆಗತಾನೆ ಸ್ಥಾಪಿತವಾಗಿದ್ದ ಚಿತ್ರದುರ್ಗದ ಇಂಟರ್‍ಮೀಡಿಯೆಟ್ ಕಾಲೇಜಿನ ಮುಖ್ಯಸ್ಥರಾಗಿ ನೇಮಕಗೊಂಡರು. ಒಂದು ವರ್ಷಕಾಲ ಅಲ್ಲಿದ್ದರು. 1949ರಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಆರು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 1955ರಲ್ಲಿ ನಿವೃತ್ತಿಗೊಂಡರು. ಇವರ ವಿದ್ವತ್ತು ಮತ್ತು ಆಡಳಿತ ದಕ್ಷತೆಯನ್ನು ಗಮನಿಸಿದ ಅಂದಿನ ಕರ್ನಾಟಕದ ಸರ್ಕಾರ ಇವರನ್ನು ಸಾಹಿತ್ಯ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಿತು (1956). ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿಯ ಸುಲಭ ಆವೃತ್ತಿ ಬಿಡುಗಡೆಗೊಂಡದ್ದೂ ಸರ್ಕಾರ ಯೋಜಿಸಿದ್ದ ಕನ್ನಡ ವಿಶ್ವಕೋಶದ ಸಾಮಗ್ರಿ ಸಂಗ್ರಹಣಾ ಕಾರ್ಯ ತಕ್ಕಮಟ್ಟಿಗೆ ಪ್ರಗತಿ ಹೊಂದಿದ್ದೂ ರಾಯರು ನಿರ್ದೇಶಕರಾಗಿದ್ದ ಅವಧಿಯಲ್ಲೇ. ಸುಮಾರು ಮೂರು ವರ್ಷಗಳ ಕಾಲ ಆ ಇಲಾಖೆಯಲ್ಲಿ ಸೇವೆ ಸಲ್ಲಿಸಿ 1959ರಲ್ಲಿ ಬಿಡುಗಡೆ ಹೊಂದಿದರು.

	ಇವಲ್ಲದೆ ರಾಯರು ಹಲವು ಗೌರವ ಹುದ್ದೆಗಳನ್ನೂ ಅಲಂಕರಿಸಿದ್ದರು. 1959ರಲ್ಲಿ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, 1954-56ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಚಾಲಕ ಅಧ್ಯಕ್ಷರಾಗಿಯೂ ಸದರ್ನ್ ಲ್ಯಾಂಗ್ವೇಜಸ್ ಬುಕ್ ಟ್ರಸ್ಟ್‍ನ ಕನ್ನಡ ಶಾಖೆಯ ಸಂಚಾಲಕ-ಅಧ್ಯಕ್ಷರಾಗಿಯೂ ನಾಲ್ಕು ವರ್ಷಕಾಲ ಆಲ್ ಇಂಡಿಯಾ ರೇಡಿಯೋದ ಸೆಂಟ್ರಲ್ ಪ್ರೋಗ್ರಾಮ್ ಅಡ್ವೈಸರಿ ಕಮಿಟಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.

	ಮೂರ್ತಿರಾಯರ ಮೊದಲ ಪುಸ್ತಕ ಆಷಾಡಭೂತಿ (1931). ಫ್ರೆಂಚ್ ನಾಟಕ ತಾರೆ ಮೊಲಿಯೇರ್‍ನ (1622-73) ತಾರ್ತುಫ್ ನಾಟಕದ ಆಧಾರದ ಮೇಲೆ ಬರೆದದ್ದು. ಪ್ರಕಟವಾದ ಕೂಡಲೆ ಅನೇಕ ಕಡೆಗಳಲ್ಲಿ ಪ್ರಯೋಗಗೊಂಡು ರಾಯರಿಗೆ ಕೀರ್ತಿಯನ್ನು ತಂದುಕೊಟ್ಟಿತು. ಆಷಾಡಭೂತಿ ನಾಟಕ ಓದಿದ ಯಾರೂ ಅದನ್ನು ಅನುವಾದವೆಂದೊ ಅಳವಡಿಕೆಯೆಂದೊ ಭಾವಿಸುವುದಿಲ್ಲ. ತಿಳಿಗನ್ನಡದಲ್ಲಿ ರಚಿತವಾಗಿರುವ ಒಂದು ಸ್ವತಂತ್ರ ಕೃತಿಯಂತೆ ಇದು ಓದಿಸಿಕೊಳ್ಳುತ್ತದೆ. ಮೂಲದ ಸನ್ನಿವೇಶಗಳನ್ನೂ ಹೆಸರುಗಳನ್ನೂ ಈ ದೇಶದ ಪರಿಸರಕ್ಕೆ ಮೂರ್ತಿರಾಯರು ಅಳವಡಿಸಿಕೊಂಡಿದ್ದಾರೆ.

	ರಾಯರ ಯಶಸ್ಸನ್ನು ಹೆಚ್ಚಿಸಿದ ಇನ್ನೊಂದು ಕೃತಿ ಸಾಕ್ರಟೀಸಿನ ಕೊನೆಯ ದಿನಗಳು (1934). ಪ್ಲೇಟೋನ ಎನ್‍ಥಿಪ್ರೊ, ಕ್ರಿಟೊ, ಅಪಾಲಜಿ ಮತ್ತು ಫೀಡೋ ಎಂಬ ಸಂವಾದಗಳನ್ನು ಅನುವಾದಿಸಿ ಸಾಕ್ರಟೀಸಿನ ಕೊನೆಯ ದಿನಗಳು ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ. ವಿಸ್ತಾರವಾದ ಅವತರಣಿಕೆಯಲ್ಲಿ ಅನುವಾದಕರು ಸಾಕ್ರಟೀಸಿನ ವ್ಯಕ್ತಿಚಿತ್ರವನ್ನು. ಅವನ ಮಾತುಕತೆಗಳ ಮೂಲಕ ಅವನ ತತ್ತ್ವ, ಸಿದ್ಧಾಂತಗಳು ರೂಪುಗೊಂಡ ಆವರಣದ ವಿವರಗಳನ್ನು ನೀಡಿದ್ದಾರೆ. ಇವರಿಗೆ ಮೂಲ ಗ್ರೀಕ್ ಭಾಷೆಯ ಇಂಗ್ಲಿಷ್ ಅನುವಾದ. ಅನುವಾದ ಕ್ರಿಯೆಯಲ್ಲಿ ಸ್ಪಷ್ಟತೆಯ ಜೊತೆಗೆ ಸರಳತೆಯೂ ಬೆರೆತಿರಬೇಕೆಂಬ ತತ್ತ್ವವನ್ನು ರಾಯರು ಎಚ್ಚರಿಕೆಯಿಂದ ಪಾಲಿಸಿದ್ದಾರೆ.

	ಆರ್. ಎಂ. ಬ್ಯಾಲಂಟೈನನ ದಿ ಕೋರಲ್ ಐಲೆಂಡ್ ಕೃತಿಯ ಸಂಗ್ರಹಾನುವಾದ ಹವಳದ ದ್ವೀಪ. ರಾಯರ ಇತರ ಅನುವಾದ ಕೃತಿಗಳು: ಮೋಲಿಯೇರ್‍ನ ಎರಡು ನಾಟಕಗಳು, ಯೋಧನ ಪುನರಾಗಮನ, ಪಾಶ್ಚಾತ್ಯ ಸಣ್ಣ ಕಥೆಗಳು, ಅಮೆರಿಕನ್ ಸಾಹಿತ್ಯ, ಇಂಡಿಯ ಇಂದು ಮತ್ತು ನಾಳೆ (ಜವಹರಲಾಲ್ ನೆಹರೂ ಅವರ ಇಂಡಿಯಾ ಟುಡೆ ಅಂಡ್ ಟುಮಾರೊ ಪುಸ್ತಕದ ಅನುವಾದ). ಈ ಎಲ್ಲದರಲ್ಲಿಯೂ ಮೂಲಕ್ಕೆ ನಿಷ್ಠೆ ತೋರಿಸಿಯೂ ಭಾಷೆಯ ಸರಳತೆಯನ್ನು ಉಳಿಸಿಕೊಳ್ಳುವ, ಮೂರ್ತಿರಾಯರದ್ದೇ ಆದ ವಿಶಿಷ್ಟ ಶೈಲಿಯನ್ನು ಕಾಣಬಹುದು.

	ಇವರ ಅನುವಾದ ಕೃತಿಗಳಲ್ಲಿ ವಿಶೇಷವಾದ ಉಲ್ಲೇಖಕ್ಕೆ ಅರ್ಹವಾದದ್ದು ಚಂಡಮಾರುತ (1981). ವಿಲಿಯಂ ಷೇಕ್‍ಸ್ಪಿಯರ್‍ನ ಪ್ರಖ್ಯಾತ ನಾಟಕ ದಿ ಟೆಂಪೆಸ್ಟ್ ಎಂಬುದರ ಅನುವಾದ ಇದು. ಸುಮಾರು 66 ಪುಟಗಳಷ್ಟು ದೀರ್ಘವಾದ ಅವತರಣಿಕೆಯಲ್ಲಿ ರಾಯರು ಷೇಕ್‍ಸ್ಪಿಯರನ ಮೂಲ ನಾಟಕದ ಎಲ್ಲ ಮುಖಗಳನ್ನೂ ಸಮಗ್ರವಾಗಿ ವಿಶ್ಲೇಷಿಸಿದ್ದಾರೆ. ಮಾನವ ಸ್ವಭಾವಕ್ಕೆ ಸಂಬಂಧಪಟ್ಟ ಅನೇಕ ಸಮಸ್ಯೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಅತ್ಯಂತ ವಿದ್ವತ್‍ಪೂರ್ಣವಾದ ಈ ಸಮೀಕ್ಷೆ ವಿದ್ವತ್ತಿನ ಪರಿಭಾಷೆಯಿಂದ ಓದುಗರನ್ನು ಹೆದರಿಸದೆ, ಆತ್ಮೀಯವಾದ ರೀತಿಯಲ್ಲಿ ಆ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಷೇಕ್‍ಸ್ಪಿಯರನ ನಾಟಕವೊಂದರ ಅನುವಾದಕ್ಕೆ ತೊಡಗುವವರು ಸಂಪಾದಿಸಿರಬೇಕಾದ ಇಂಗ್ಲಿಷ್ ಮತ್ತು ಕನ್ನಡಭಾಷೆಗಳ ಪ್ರಭುತ್ವ ಯಾವ ಸ್ವರೂಪದ್ದಾಗಿರಬೇಕು. ಅನುವಾದ ಎಷ್ಟು ನಿಖರವಾಗಿ ಮೂಲದ ಪ್ರತಿಬಿಂಬವಾಗಬಲ್ಲುದು ಎಂಬುದನ್ನು ತೋರಿಸುವ ಕೃತಿ ಇದು.

	ಇಂಗ್ಲಿಷಿನಿಂದ ಕನ್ನಡಕ್ಕೆ ಮಾತ್ರವಲ್ಲದೆ ಕನ್ನಡದಿಂದ ಇಂಗ್ಲಿಷಿಗೂ ಇವರಿಂದ ಅನುವಾದಗಳು ನಡೆದಿವೆ. ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯ ಅನುವಾದ ದಿ ರಿಟರ್ನ್ ಟು ದಿ ಸಾಯಿಲ್. ಅಲ್ಲದೆ ತಮ್ಮದೇ ಕೆಲವು ಪ್ರಬಂಧಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಎಸ್. ರಾಧಾಕೃಷ್ಣನ್, ಎಂ. ವಿಶ್ವೇಶ್ವರಯ್ಯ ಮೊದಲಾದ ವ್ಯಕ್ತಿಗಳನ್ನು ಕುರಿತು ಪ್ರಬಂಧಗಳನ್ನೂ ಬಿ. ಎಂ. ಶ್ರೀಕಂಠಯ್ಯನವರನ್ನು ಕುರಿತು ಇಂಗ್ಲಿಷಿನಲ್ಲಿ ಪುಸ್ತಕವನ್ನೂ ಬರೆದಿದ್ದಾರೆ.

	ರಾಯರಿಗೆ ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶಾಶ್ವತವಾದ ಸ್ಥಾನ ದೊರಕಿಸಿಕೊಟ್ಟಿರುವ ಪ್ರಕಾರವೆಂದರೆ ಲಲಿತ ಪ್ರಬಂಧ, ಹಗಲುಗನಸುಗಳು (1937); ಅಲೆಯುವ ಮನ (1959); ಮಿನುಗು ಮಿಂಚು (1962)__ ಇವು ಮೂರ್ತಿರಾಯರ ಲಲಿತ ಪ್ರಬಂಧಗಳ ಸಂಕಲನಗಳು (ಈಗ ಮೂರೂ ಒಂದು ಸಂಕಲನದಲ್ಲಿ, ಸಮಗ್ರ ಲಲಿತ ಪ್ರಬಂಧಗಳು ಎಂಬ ಹೆಸರಿನಿಂದ ಅಚ್ಚಾಗಿವೆ, 1988). ಲಲಿತ ಪ್ರಬಂಧ ಎಂಬ ಸಾಹಿತ್ಯ ಪ್ರಕಾರವನ್ನು ಜನಪ್ರಿಯಗೊಳಿಸಿದವರೇ ಇವರು. ಅದರ ರಚನೆಯಲ್ಲಿ ಇಂದಿಗೂ ಇವರು ಆಚಾರ್ಯ ಸ್ಥಾನದಲ್ಲಿದ್ದಾರೆ. ಮೃದುವಾದ ಹಾಸ್ಯ ಲಘುವಾದ ಚಿಂತನೆ. ಮನವನ್ನು ಉಲ್ಲಾಸಗೊಳಿಸುವಂಥ, ವಿಚಾರ ಇವು ಇವರ ಲಲಿತ ಪ್ರಬಂಧಗಳ ಪ್ರಧಾನ ಲಕ್ಷಣಗಳು. ಗೌರಜ್ಜಿ, ಹಗಲುಗನಸುಗಳು, ಹೂವುಗಳು, ಗುಡಿಯ ಪ್ರಯಾಣ__ಇವು ಇವರ ಉತ್ತಮ ಪ್ರಬಂಧಗಳ ಪೈಕಿ ಕೆಲವು.

	ಪ್ರವಾಸ ಸಾಹಿತ್ಯ ಕ್ಷೇತ್ರಕ್ಕೆ ರಾಯರು ನೀಡಿರುವ ಅಮೂಲ್ಯವಾದ ಕೊಡುಗೆ ಅಪರ ವಯಸ್ಕನ ಅಮೆರಿಕಾ ಯಾತ್ರೆ. ಅಮೆರಿಕ ಎಲ್ಲ ದೇಶಗಳ ಎಲ್ಲ ಕಾಲಗಳ ತರುಣ ತರುಣಿಯರನ್ನೂ ಕೈಬೀಸಿ ಕರೆಯುತ್ತಿರುವ ಯಕ್ಷಲೋಕ. ಅಂಥ ದೇಶಕ್ಕೆ ಮೂರ್ತಿರಾಯರು ಮೊದಲ ಸಲ ಹೋದದ್ದು ತಮ್ಮ 73ನೆಯ ವಯಸ್ಸಿನಲ್ಲಿ; ಎರಡನೆಯ ಸಲ ಅಲ್ಲಿ ಸುತ್ತಾಡಿದ್ದು ತಮ್ಮ 76ನೆಯ ವಯಸ್ಸಿನಲ್ಲಿ. ಪಕ್ವ ವಯಸ್ಸಿನ, ಪಕ್ವ ಮನಸ್ಸಿನ, ಸುಲಭವಾಗಿ ಭಾವಾತಿರೇಕಕ್ಕೆ ಒಳಗಾಗದ ವ್ಯಕ್ತಿಯೊಬ್ಬರು ಅಮೆರಿಕ ದೇಶದ ಎಲ್ಲ ಮುಖಗಳನ್ನು ವ್ಯಕ್ತಿನಿಷ್ಠನಾಗಿ ನೋಡಿ ತಮ್ಮ ಪ್ರತಿಕ್ರಿಯೆಗಳನ್ನು ವರ್ಣನೆಗಳನ್ನು ಸಹಜ. ಸರಳ, ಸುಂದರ ಶೈಲಿಯಲ್ಲಿ ನೀಡಿದ್ದಾರೆ. ಕನ್ನಡದ ಅತ್ಯುತ್ತಮ ಪ್ರವಾಸ ಕಥನಗಳಲ್ಲಿ ಒಂದೆಂದು ಇದು ಪರಿಗಣಿತವಾಗಿದೆ.

	ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟ ಕೃತಿ ಚಿತ್ರಗಳು-ಪತ್ರಗಳು (ಪ್ರಕಟಣೆ : 1978. ಪ್ರಶಸ್ತಿ 1979). ಪ್ರೌಢಶಾಲೆ, ಕಾಲೇಜುಗಳಲ್ಲಿ, ಅನಂತರದ ಬದುಕಿನಲ್ಲಿ ರಾಯರು ಕಂಡ ಅನೇಕ ವ್ಯಕ್ತಿಗಳ ಜೀವನದ ನೆಳಲು-ಬೆಳಕುಗಳನ್ನು ಸೊಗಸಾಗಿ ಚಿತ್ರಿಸಿರುವ ಕೃತಿ ಇದು. ಎಸ್. ರಾಧಾಕೃಷ್ಣನ್‍ರವರಂಥ ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿಗಳು, ಜೆ. ಸಿ. ರಾಲೋ, ಟಿ. ಎಸ್-ವೆಂಕಣ್ಣಯ್ಯ, ಬಿ. ಎಂ. ಶ್ರೀಕಂಠಯ್ಯ ಮುಂತಾದ ಪ್ರಸಿದ್ಧ ಪ್ರಾಧ್ಯಾಪಕರು ಇವರ ಜೊತೆ ಜೊತೆಗೇ ಡಿ. ಎನ್. ಮೂರ್ತಿಯವರು ಎನ್. ದೇಶಿಕಾಚಾರ್ಯರು ಮುಂತಾದ ಅಷ್ಟೇನೂ ಪ್ರಖ್ಯಾತರಲ್ಲದ ಆದರೆ ತಮ್ಮ ಪಾಂಡಿತ್ಯ, ಓದು, ಶಿಷ್ಯವಾತ್ಸಲ್ಯಗಳಿಂದ ಮೂರ್ತಿರಾಯರ ಮನಸ್ಸನ್ನು ಸೂರೆಗೊಂಡ ಇತರ ಉದಾತ್ತ ಚರಿತರ ವ್ಯಕ್ತಿ ಚಿತ್ರಗಳೂ ಅತ್ಯಂತ ಸ್ವಾರಸ್ಯಕರ ರೀತಿಯಲ್ಲಿ ಇಲ್ಲಿ ವರ್ಣಿತವಾಗಿವೆ. ಮೈಸೂರು ವಿಶ್ವವಿದ್ಯಾನಿಲಯ, ಸರ್ಕಾರ ಸ್ಥಾಪಿಸಿದ ಕಾಲೇಜುಗಳು, ಆಕಾಶವಾಣಿ, ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಮತ್ತು ಸಂಸ್ಕøತಿ ಅಭಿವೃದ್ಧಿ ಇಲಾಖೆ__ಮುಂತಾದ ಕೆಲವು ವಿಶಿಷ್ಟ ಸಂಸ್ಥೆಗಳನ್ನು ಕುರಿತ ಮಿಂಚುನೋಟಗಳು ಇಲ್ಲಿವೆ. ಉತ್ತರಾರ್ಧದಲ್ಲಿರುವ 75 ಪತ್ರಗಳಲ್ಲಿ ಹೆಚ್ಚಿನವು ಅವರ ಮಿತ್ರರಾದ ತೀ. ನಂ. ಶ್ರೀಕಂಠಯ್ಯರನವರಿಗೆ ಬರೆದವು. ಕಳೆದುಹೋದ ಕೆಲವು ದಶಕಗಳ ಸಾಹಿತ್ಯಕ ಚಟುವಟಿಕೆಗಳು, ವಿದ್ವತ್ಪ್ರಪಂಚದ ಆಗುಹೋಗುಗಳು, ಸಾಮಾಜಿಕ ಘಟನೆಗಳನ್ನು, ತೀರ ಕಡಿಮೆ ಎನ್ನಬಹುದಾದಷ್ಟು ವೈಯಕ್ತಿಕ ವಿವರಗಳನ್ನು ಈ ಪತ್ರಗಳು ಪುನಾರಚಿಸಿ ನೀಡುತ್ತವೆ. ಪತ್ರಗಳು ಸ್ವಾದುವಾದ ಸಾಹಿತ್ಯವಾಗಿದೆ ಇಲ್ಲಿ. ಕೊನೆಯಲ್ಲಿಯ ಕೆಲವು ಪತ್ರಗಳು ರಾಯರು ತಮ್ಮ ಮಗನಿಗೆ, ಸೊಸೆಗೆ ಬರೆದವು. ಸಾಕಾರ-ನಿರಾಕಾರ ದೈವದ ಕಲ್ಪನೆ, ಬದುಕಿನ ಸ್ವರೂಪ ಮುಂತಾದವುಗಳನ್ನು ತಮಗೆ ಸಿದ್ಧಿಸಿರುವ ಶೈಲಿಯಲ್ಲಿ ಸರಳವೂ ಅತ್ಯಂತ ನಿಕೃಷ್ಟವೂ ಆದ ರೀತಿಯಲ್ಲಿ ವಿವರಿಸಿದ್ದಾರೆ.

	ಕನ್ನಡದ ಶ್ರೇಷ್ಠ ವಿಮರ್ಶಕರಲ್ಲಿ ಮೂರ್ತಿರಾಯರು ಒಬ್ಬರು ಎಂಬುದನ್ನು ತೋರಿಸುವ ಇವರ ವಿಮರ್ಶಾಕೃತಿಗಳು ಇವು: ಷೇಕ್‍ಸ್ಪಿಯರ್ (ಭಾಗ1-1962) : ಮಾಸ್ತಿಯವರ ಕಥೆಗಳು (1971); ಪೂರ್ವಸೂರಿಗಳೊಡನೆ (1982); ಸಾಹಿತ್ಯ ಮತ್ತು ಸತ್ಯ (1982); ಮತ್ತು ವಿಮರ್ಶಾತ್ಮಕ ಪ್ರಬಂಧಗಳು (1982). ಷೇಕ್‍ಸ್ಪಿಯರ್ ಬಗ್ಗೆ ಮೂರ್ತಿರಾಯರಿಗಿಂತ ಪ್ರೀತಿ, ಗೌರವಗಳನ್ನು ಮಾತ್ರವಲ್ಲದೆ ಅವನ ನಾಟಕಗಳ ವಿಷಯದಲ್ಲಿ ಇವರು ಪಡೆದಿರುವ ತಳಸ್ಪರ್ಶಿಯಾದ ಪಾಂಡಿತ್ಯವನ್ನು, ಇಷ್ಟೆಲ್ಲದರ ಹಿನ್ನೆಲೆಯಲ್ಲಿ ಅವನ ನಾಟಕಗಳನ್ನು ವಿಚಿಕಿತ್ಸಕ ದೃಷ್ಟಿಯಿಂದ ನೋಡಿರುವ ಇವರ ನಿಶಿತವಾದ ವಿಮರ್ಶಾಮತಿಯನ್ನು ಇವರ ಷೇಕ್‍ಸ್ಪಿಯರ್ ಕೃತಿ ಎತ್ತಿ ತೋರಿಸುತ್ತದೆ. ಮೇಲೆ ಹೆಸರಿಸಿರುವ ಅವರ ಇತರ ಕೃತಿಗಳು ವಿಮರ್ಶೆಯ ಮೂಲ ತತ್ತ್ವಗಳನ್ನು ನಿರೂಪಿಸುವಾಗ ಹೇಗೋ ಹಾಗೆ ಒಂದು ಸಾಹಿತ್ಯ ಕೃತಿಯನ್ನು ಅದು ಲಕ್ಷಾಂತರ ಜನರಿಂದ ಹೊಗಳಲ್ಪಟ್ಟಿರುವ ಆರ್ಷೇಯ ಕೃತಿಯಾಗಲಿ. ಲಕ್ಷಾಂತರ ಜನರ ಗಮನಕ್ಕೆ ಬರಬೇಕಾಗಿರುವ ಆಧುನಿಕ ಕೃತಿಯಾಗಲಿ_ಎಂಥ ಆರೋಗ್ಯಕರವಾದ, ಪೂರ್ವಗ್ರಹ ದೂರವಾದ, ವಸ್ತುನಿಷ್ಠವಾದ, ಅತ್ಯಂತ ವೈಜ್ಞಾನಿಕವಾದ, ವೈಚಾರಿಕವಾದ ನಿಲುವನ್ನು ತಾಳುವುದು ಸಾಧ್ಯ ಎಂಬುದನ್ನು ತೋರಿಸುತ್ತದೆ. ಭಾವಾತಿರೇಕಗಳು, ಸಂಪ್ರದಾಯ ನಿಷ್ಠೆ, ಪಕ್ಷಪಾತಗಳು, ಕಾಲದೇಶಗಳು, ಪಂಥ, ಚಳವಳಿಗಳು ಆಪರ ವಯಸ್ಕನಾದ ವಿಮರ್ಶಕನೊಬ್ಬನಿಗೆ ಯಾವುದೇ ಇತಿಮಿತಿಗಳನ್ನು ಸೃಷ್ಟಿಸಿ ಅವನ ವಿಮರ್ಶೆ ಕುಂಟುವಂತೆ ಮಾಡಲಾರವು ಎಂಬುದಕ್ಕೆ ಇವರ ವಿಮರ್ಶೆಯ ಕೃತಿಗಳು ಸಾಕ್ಷಿಯಾಗಿವೆ. ಕಲಾವಿಮರ್ಶೆಯಂಥ ಅತ್ಯಂತ ಸಾಹಸ ಕಾರ್ಯಕ್ಕೆ ತೊಡಗುವ ಯಾರೇ ಆದರೂ ಇವರ ವಿಮರ್ಶಾಕೃತಿಗಳನ್ನು ಆಳವಾಗಿ ಅಧ್ಯಯನ ಮಾಡುವುದು ಕನ್ನಡ ವಿಮರ್ಶೆಯ ಆರೋಗ್ಯದ ದೃಷ್ಟಿಯಿಂದ ಅಗತ್ಯವಾದುದು.

	ರಾಯರ ವ್ಯಕ್ತಿತ್ವ ಅತ್ಯಂತ ವಿಶಿಷ್ಟವಾದದ್ದು. ಇಳಿ ವಯಸ್ಸಿನಲ್ಲಿಯೂ ಅತ್ಯಂತ ಆರೋಗ್ಯಕರವಾದ ದೃಷ್ಟಿಯನ್ನು ಹೊಂದಿರುವ ಇವರ ಮನಸ್ಸು ಸದಾ ಅನ್ವೇಷಕವಾಗಿದ್ದು ಹೊಸ ಹೊಸ ವಿಷಯಗಳನ್ನು ತಿಳಿಯುವ, ವಿಶ್ಲೇಷಿಸುವ ಕುತೂಹಲವನ್ನು ತೋರಿಸುತ್ತಲೇ ಇರುವಂಥದು. ದೈವದ ವಿಷಯದಲ್ಲಾಗಲಿ, ಸಂಪ್ರದಾಯ, ಆಚರಣೆಗಳ ವಿಷಯದಲ್ಲಾಗಲಿ ಲವಲೇಶವಾದರೂ ಮೂಢನಂಬಿಕೆಗಳಿಲ್ಲದ, ತೆರೆದ ಮನಸ್ಸಿನ ಅಪರೂಪದ ವ್ಯಕ್ತಿ ಇವರು. ಇತರರಿಗಾಗಿ ಹೃತ್ಪೂರ್ವಕವಾಗಿ ತುಡಿದು, ಮಿತಿಮೀರಿದ ನೆರವು ನೀಡುವ ಮೃದುಚೇತನ ರಾಯರದು.

	ಇವರಿಗೆ ಶಾಸ್ತ್ರೀಯ ಸಂಗೀತದಲ್ಲಿ ತೀವ್ರವಾದ ಆಸಕ್ತಿಯಷ್ಟೇ ಅಲ್ಲ ಆಳವಾದ ಪಾಂಡಿತ್ಯವೂ ಇದೆ. ಸಾಹಿತ್ಯ, ಕಲೆ, ಸಂಗೀತ, ಇವೆಲ್ಲಕ್ಕಿಂತ ಬದುಕು ತುಂಬ ದೊಡ್ಡದು ಎಂಬ ಜೀವನ ಶ್ರದ್ಧೆ ಇವರದು.

	ರಾಯರಿಗೆ ಕನ್ನಡದ ಜನತೆ ಆತ್ಮೀಯವಾದ ರೀತಿಯಲ್ಲಿ ಅನೇಕ ಕಡೆಗಳಲ್ಲಿ ಸನ್ಮಾನ ನೀಡಿದೆ. ವಿಶ್ವವಿದ್ಯಾನಿಲಯ, ಸರ್ಕಾರಗಳು ಇವರನ್ನು ಉಚಿತ ರೀತಿಯಲ್ಲಿ ಗೌರವಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳು ಇವರ ಕೃತಿಗಳಿಗೆ ಬಹುಮಾನ ನೀಡಿವೆ. ಮೈಸೂರು ವಿಶ್ವವಿದ್ಯಾನಿಲಯ 1977ರಲ್ಲಿ ಇವರಿಗೆ ಗೌರವ ಡಿ.ಲಿಟ್. ಪದವಿ ನೀಡಿತು. ಕರ್ನಾಟಕ ಸಾಹಿತ್ಯ ಅಕಾಡೆಮಿ 1974ರಲ್ಲಿ ಇವರಿಗೆ ಪ್ರಶಸ್ತಿ ಕೊಟ್ಟಿತು. 1984ರಲ್ಲಿ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿತು. ಅದೇ ವರ್ಷ ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 56ನೆಯ ಅಧಿವೇಶನದ (ಕೈವಾರ) ಅಧ್ಯಕ್ಷರಾಗಿ ಆರಿಸಿ ಗೌರವಿಸಿತು.
(ಪಿ.)

ಮೂರ್ತಿರಾಯರ ಆತ್ಮವೃತ್ತ `ಸಂಜೆಗಣ್ಣಿನ ಹಿನ್ನೋಟ' ಕನ್ನಡದಲ್ಲಿ ಈ ಪ್ರಕಾರಕ್ಕೆ ವಿಶೇಷ ಕೊಡುಗೆ. ಸಾಹಿತ್ಯವಲ್ಲದೆ ಭಾರತೀಯ ಧಾರ್ಮಿಕ ಗ್ರಂಥಗಳು, ತತ್ತ್ವ ಚಿಂತನೆ, ಪಾಶ್ಚಾತ್ಯ ತತ್ತ್ವ ಚಿಂತನೆ, ಇಪ್ಪತ್ತನೆಯ ಶತಮಾನದ ಮಹಾನ್ ಚಿಂತಕರಲ್ಲಿ ಹಲವರು ಕೃತಿಗಳ ಅಧ್ಯಯನ, ವಿಸ್ತಾರವಾದ ಲೋಕಾನುಭವ ಇವುಗಳ ಜೊತೆಗೆ ಇಲ್ಲಿ ಪರಿಪಕ್ವ ಚಿಂತನೆ ಸಂಗಮವಾಗಿದೆ. ಮೂರ್ತಿರಾಯರು ಪರಿಪಕ್ವ ಚಿಂತನೆಗೆ ಮತ್ತೊಂದು ಹೆಸರು. ಅವರಿಗೆ ಸೊಗಸಾದ ಹಾಸ್ಯ ಪ್ರಜ್ಞೆ ಇತ್ತು. ಗಂಭೀರ ಚಿಂತನೆ, ಗಾಢವಾದ ಅನುಭವ, ತಿಳಿ ಹಾಸ್ಯ ಇವುಗಳ ಸಂಗಮವಾದ ಈ ಕೃತಿಯು 20ನೆಯ ಶತಮಾನದ ಬಹುಭಾಗದಲ್ಲಿ ಹಿಂದಿನ ಮೈಸೂರಿನ ಸಾಂಸ್ಕøತಿಕ ಚರಿತ್ರೆಯೂ ಆಗುತ್ತದೆ.
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ